fbpx
ದೇವರು

ಕಾರ್ತಿಕ ಮಾಸ ಶಿವನ ಮಾಸ,ಈ ಮಾಸದಲ್ಲಿ ಶಿವನ ಆರಾಧನೆ ಹೇಗೆ ಮಾಡ್ಬೇಕು ಇದ್ರಿಂದ ಸಿಗೋ ಫಲಗಳೇನು ಗೊತ್ತಾ

ಶಿವ ಎಂದರೆ ಜ್ಞಾನದ ಪ್ರತೀಕ, ಓಂಕಾರ ಸ್ವರೂಪಿ,ಸೃಷ್ಟಿ ಸ್ಥಿತಿಯ ಲಯಕಾರಕ ಪಾರ್ವತಿಗೆ ಅರ್ಧ ದೇಹವನ್ನೇ ಕೊಟ್ಟ ಅರ್ಧನಾರೀಶ್ವರ, ಗಂಗೆಯನ್ನು ತಲೆಯ ಮೇಲೆ ಕೂರಿಸಿಕೊಂಡ ಗಂಗಾಧರ, ಭಕ್ತಿಗೆ ಬಹಳ ಬೇಗನೆ ಒಲಿಯುವ ಕರುಣಾಮಯಿ, ಶಿವನೇ ಕಾರ್ತಿಕ ಮಾಸಕ್ಕೆ ಅಧಿಪತಿ ಅವನೇ ಸಾಕ್ಷಾತ್ ಬಂ ಬಂ ಬೋಲೇ ನಾಥ.
ಕಾರ್ತಿಕ ಮಾಸದ ಸೋಮವಾರ ಅತ್ಯಂತ ವಿಶೇಷವೇಕೆ ? ಕಾರ್ತಿಕ ಸೋಮವಾರ ಶಿವನ ಪೂಜೆಗೆ ಮಂಗಳಕರ ದಿನಾವೇಕೆ ?
ಕಾರ್ತಿಕ ಮಾಸ ಪರಮೇಶ್ವರನ ಆರಾಧನೆಗೆ ಮತ್ತು ಪೂಜೆಗೆ ಮುಡಿಪಾಗಿರುವ ಮಾಸ. ಪ್ರತಿದಿನವೂ ಶಿವಾರಾಧನೆ ಮಾಡುವುದು ಅತ್ಯಂತ ಪುಣ್ಯಪ್ರದ. ಅದರಲ್ಲೂ ಕಾರ್ತಿಕ ಸೋಮವಾರಗಳಲ್ಲಿ ಶಿವನಿಗೆ ಅತ್ಯಂತ ಪ್ರಿಯ. ಆದ್ದರಿಂದ ಈ ಮಾಸದಲ್ಲಿ ಸೋಮವಾರದ ದಿನಗಳಂದು ಬೋಲೇನಾಥನನ್ನು ಆರಾಧಿಸುವುದರಿಂದ ಅನೇಕ ಫಲಗಳನ್ನು ಪಡೆಯಬಹುದು. ಕಾರ್ತಿಕ ಸೋಮವಾರದಲ್ಲಿ ರಾಹುಕಾಲದಲ್ಲಿ ಶಿವನನ್ನು ಪೂಜಿಸಿದರೆ ವಿಶೇಷವಾದ ಫಲಗಳನ್ನು ಪಡೆಯಬಹುದು. ರಾಹುಕಾಲದಲ್ಲಿ ಶಿವನಿಗೆ ಕ್ಷೀರಾಭಿಷೇಕವನ್ನು ಮಾಡುವುದರಿಂದ ಪೂರ್ವ ಜನ್ಮದ ಪಾಪಗಳು ಪರಿಹಾರವಾಗುತ್ತವೆ. ಕಾರ್ತಿಕ ಸೋಮವಾರಗಳಲ್ಲಿ ಪ್ರದೋಷ ಪೂಜೆ ಮಾಡುವುದರಿಂದ ಶಿವನ ಸಂಪೂರ್ಣ ಕೃಪೆ ನಿಮ್ಮ ಮೇಲೆ ಇರುತ್ತದೆ.

 

 

 

ಕಾರ್ತಿಕ ಸೋಮವಾರದ ದಿನ ಉಪವಾಸ ಶ್ರೇಷ್ಠ ಏಕೆ ?
ಕೈಲಾಸವಾಸಿ ಬೋಲೇನಾಥನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಬೇಕು. ಅದಕ್ಕಾಗಿ ಕಾರ್ತಿಕ ಸೋಮವಾರಗಳಂದು ಶಿವನ ಭಕ್ತರು ಉಪವಾಸವಿರುತ್ತಾರೆ. ಈ ರೀತಿ ಉಪವಾಸವಿದ್ದು ಶಿವರಾತ್ರಿಯನ್ನು ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ.ಉಪವಾಸ ನಮ್ಮನ್ನು ಸಾತ್ವಿಕತೆಯ ಕಡೆಗೆ ಕೊಂಡೊಯ್ಯುತ್ತದೆ , ಅಷ್ಟೇ ಅಲ್ಲ ಧಾರ್ಮಿಕ ಆಚರಣೆಗಳಿಂದ ದೇಹಕ್ಕೆ ಚೈತನ್ಯ ನೀಡುತ್ತದೆ. ಹೀಗಾಗಿ ಕಾರ್ತಿಕ ಸೋಮವಾರಗಳಂದು ಉಪವಾಸ ಮಾಡುವುದು ಅತ್ಯಂತ ಶ್ರೇಯಸ್ಕರ. ಉಪವಾಸವಿದ್ದು ವ್ರತ ಆಚರಿಸಿದರೆ ಭಗವಂತನ ಒಲುಮೆಗೆ ಬೇಗನೆ ಪಾತ್ರರಾಗಬಹುದು ಎನ್ನುವ ನಂಬಿಕೆ ಇದೆ.
ಕಾರ್ತಿಕ ಸೋಮವಾರಗಳಂದು ಶಿವನನ್ನು ಹೇಗೆ ಪೂಜಿಸಬೇಕು ? ಶಿವ ಕ್ಷೇತ್ರ ದರ್ಶನದಿಂದ ಆಗುವ ಫಲಗಳೇನು ?
ಸೋಮವಾರದ ಅಧಿಪತಿ ಚಂದ್ರ. ಆಕಾಶದಲ್ಲಿ ಮಿನುಗುವ ಚಂದ್ರ ಮನೋಕಾರಕ ಅಂದರೆ ಆಕಾಶದಲ್ಲಿ ಮಿನುಗುವ ಚಂದ್ರ ಮನಸ್ಸನ್ನು ನಿಗ್ರಹಿಸುವವನು. ಯಾರು ತಮ್ಮ ಮನಸ್ಸನ್ನು ನಿಗ್ರಹದಲ್ಲಿ ಇಟ್ಟುಕೊಳ್ಳುತ್ತಾರೆ, ಅಂತಹ ವ್ಯಕ್ತಿಗಳು ಉನ್ನತ ಸ್ಥಾನಕ್ಕೆ ಎರುತ್ತಾರೆ.ತನ್ನ ಶಿರದಲ್ಲಿ ಚಂದ್ರನನ್ನು ಧಾರಣೆ ಮಾಡಿಕೊಂಡಿರುವ ಶಿವನನ್ನು ಕಾರ್ತಿಕ ಮಾಸದಲ್ಲಿ ಶಿವನ ಆರಾಧನೆಯಿಂದ ಉತ್ತಮ ಜ್ಞಾನ ಪ್ರಾಪ್ತಿಯಾಗುತ್ತದೆ. ಸಾಮಾನ್ಯವಾಗಿ ಶಿವಭಕ್ತರು ಪ್ರತಿನಿತ್ಯ ಪೂಜೆ ಮಾಡುತ್ತಾರೆ. ಆದರೆ ಕಾರ್ತಿಕ ಮಾಸದಲ್ಲಿ ಶಿವನನ್ನು ಆರಾಧಿಸುವುದಕ್ಕೆ ವಿಶೇಷವಾದ ನಿಯಮಗಳಿವೆ. ನಿಯಮಗಳ ಪ್ರಕಾರ ಶಿವನ ಆರಾಧನೆ ಮಾಡಿದರೆ ಶಿವನ ಸಂಪೂರ್ಣ ಕೃಪೆ ದೊರೆಯುತ್ತದೆ.

 

ಕಾರ್ತಿಕ ಸೋಮವಾರಗಳಂದು ಶಿವ ಪೂಜೆ ಮಾಡುವ ವಿಧಾನಗಳು .
ಬ್ರಾಹ್ಮೀ ಮುಹೂರ್ತದಲ್ಲಿ ಸ್ನಾನ ಮಾಡಬೇಕು. ಆ ದಿನದ ಪೂಜೆಯ ಸಂಕಲ್ಪ ಮಾಡಬೇಕು. ಸೂರ್ಯನಿಗೆ ಆರ್ಘ್ಯ ಅರ್ಪಿಸಬೇಕು, ಬೆಳಗ್ಗೆ , ಸಂಜೆ ಶಿವನಿಗೆ ತುಪ್ಪದ ದೀಪ ಹಚ್ಚಬೇಕು. ಭಕ್ತಿಯಿಂದ ಶಿವನನ್ನು ಆರಾಧಿಸಬೇಕು, ಕಾರ್ತಿಕ ಪುರಾಣವನ್ನು ಪಾರಾಯಣ ಮಾಡಬೇಕು, ಬಡವರಿಗೆ ಅನ್ನದಾನ ಮಾಡಬೇಕು , ಶಿವ ಅಭಿಷೇಕ ಪ್ರಿಯ, ಕಾರ್ತಿಕ ಸೋಮವಾರಗಳಂದು ಶಿವನಿಗೆ ಶುದ್ಧವಾದ ಗಂಗಾಜಲ, ಕ್ಷೀರಾಭಿಷೇಕ, ಕಬ್ಬಿನ ಹಾಲು, ಪಂಚಾಮೃತ, ನೀರಿನಿಂದ ಅಭಿಷೇಕ ಮಾಡುವುದರಿಂದ ವಿಶೇಷ ಫಲಗಳನ್ನು ಪಡೆಯಬಹುದು .ಶಿವ ಯಾವತ್ತೂ ತನ್ನ ಭಕ್ತರಿಂದ ಆಡಂಬರದ ಪೂಜೆಯನ್ನು ನಿರೀಕ್ಷಿಸುವವನಲ್ಲ. ನಿಷ್ಕಲ್ಮಶ ಭಕ್ತಿಗೆ ಬಹಳ ಬೇಗ ಒಲಿಯುತ್ತಾನೆ ಮಹಾದೇವ. ಭಕ್ತಿಯಿಂದ ನೀರಿನ ಅಭಿಷೇಕ ಮಾಡಿದರು ಸಾಕು ಬೋಲೇನಾಥ ಸಂಪ್ರೀತನಾಗಿ ಬೇಡಿದ ವರಗಳನ್ನು ಕರುಣಿಸುತ್ತಾನೆ.
ಕಾರ್ತಿಕ ಮಾಸದಲ್ಲಿ ರುದ್ರಾಧ್ಯಾಯದ ಮೂಲಕ ಶಿವಾರಾಧನೆ.
ಕಾರ್ತಿಕ ಮಾಸದಲ್ಲಿ ಯಜುರ್ವೇದದ ರುದ್ರಾಧ್ಯಾಯ ದಲ್ಲಿ ಬರುವ ನಮಕ, ಚಮಕ ಗಳಿಂದ ಶಿವನ ಆರಾಧನೆ ಅತ್ಯಂತ ಶ್ರೇಷ್ಠ .ಹಲವಾರು ಪರಿಣಾಮಕಾರಿ ಮಂತ್ರಗಳನ್ನು ಒಳಗೊಂಡಿರುವ ಶಕ್ತಿಯುತ ಮಂತ್ರವೇ ರುದ್ರಾಧ್ಯಾಯ. ರುದ್ರಾಧ್ಯಾಯದಲ್ಲಿರುವ ಮಂತ್ರಗಳಿಗೆ ಸಾವನ್ನು ಮೆಟ್ಟಿನಿಲ್ಲುವ ಶಕ್ತಿ ಇದೆ. ಸಾವನ್ನೇ ಜಯಿಸುವ ಈ ಮಹಾ ಮೃತ್ಯುಂಜಯ ಮಂತ್ರವು ಕೂಡ ರುದ್ರಾಧ್ಯಾಯದ ಒಂದು ಭಾಗ. ಶಿವನ ನಾಮಾವಳಿಗಳು ಮತ್ತು ಫಲಿತಗಳನ್ನು ಒಳಗೊಂಡಿರುವ ರುದ್ರಾಧ್ಯಾಯದ ಪಠಣ ಶಿವನಿಗೆ ಅತ್ಯಂತ ಪ್ರಿಯ. ಪಠನೆ ಸಾಧ್ಯವಾಗದೇ ಹೋದರೆ ರುದ್ರಾಧ್ಯಾಯ ನಮಕ, ಚಮಕ ಗಳನ್ನು ಕೇಳುತ್ತಾ ಶಿವನಿಗೆ ಅಭಿಷೇಕ ಮಾಡಿದರೆ ಶಿವನ ಒಲುಮೆ ಅತಿ ಬೇಗ ದೊರೆಯುತ್ತದೆ.
“ವಸತೋಮ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ” ಕತ್ತಲು ಎಂದರೆ ಅಜ್ಞಾನ, ಅಜ್ಞಾನವನ್ನು ಕಳೆದು ಜ್ಞಾನ ಬೆಳಗಿಸುವವನು ಎಂದು ಶಿವನನ್ನು ಬೇಡುವ ಮಾಸವಿದು. ಹೀಗಾಗಿ ಕಾರ್ತಿಕ ಮಾಸದ ಸೋಮವಾರಗಳಂದು ಶಿವನಿಗೆ ತುಪ್ಪದ ದೀಪ ಹಚ್ಚುವ ಪದ್ಧತಿ ಇದೆ . ಶಿವನಿಗೆ ತುಪ್ಪದ ದೀಪ ಹಚ್ಚಿದರೆ ಆ ದೀಪದಂತೆ ನಿಮ್ಮ ಜೀವನವೂ ಕೂಡ ಬೆಳಕಿನಲ್ಲಿ ಪ್ರಜ್ವಲಿಸುತ್ತಿದೆ.

 

ಕಾರ್ತಿಕ ಸೋಮವಾರದ ಪೂಜಾ ಫಲಗಳು .
ಶುದ್ಧ ಮನಸ್ಸಿನಿಂದ ಶ್ರದ್ಧಾ ಭಕ್ತಿಯಿಂದ ಶಿವನನ್ನು ಆರಾಧಿಸಿದರೆ ಉತ್ತಮ ಜ್ಞಾನ ವೃದ್ಧಿಯಾಗುತ್ತದೆ. ಮನೆಯಲ್ಲಿ ಸುಖ, ಶಾಂತಿ ಶಾಶ್ವತವಾಗಿ ನೆಲೆಸುತ್ತದೆ. ಮಾನಸಿಕ ನೆಮ್ಮದಿ ದೊರೆಯುತ್ತದೆ ,ಸಂಪತ್ತು ಪ್ರಾಪ್ತಿಯಾಗುತ್ತದೆ ,ಕುಟುಂಬ ಸದಸ್ಯರ ನಡುವೆ ಒಳ್ಳೆಯ ಬಾಂಧವ್ಯ ಇರುತ್ತದೆ ,ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ, ನಿಮ್ಮ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ, ಕೈಲಾಸ ವಾಸಿಯಾದ ಶಿವನ ಸಾನಿದ್ಯವಿರುವ ಈ ಜಗತ್ತಿನ ಪ್ರತಿ ಅಣು ಅಣುವಿನಲ್ಲೂ ಶಿವನಿದ್ದಾನೆ. ಯಾಕೆಂದರೆ ಲಯ ಕಾರಕನಾದ ಪರಮೇಶ್ವರನೇ ಈ ಜಗತ್ತಿನ ಸಕಲ ಜೀವರಾಶಿಯನ್ನು ಸಲಹುತ್ತಿರುವ ಮಹಾನ ಚೇತನ. ಹೀಗಾಗಿ ಕಾರ್ತಿಕ ಸೋಮವಾರಗಳಂದು ಶಿವ ಕ್ಷೇತ್ರ ದರ್ಶನ ಮಾಡಿ, ನಮ್ಮನ್ನು ಪೊರೆಯುವ ಭಗವಂತನಲ್ಲಿ ಭಕ್ತಿಯಿಂದ ಬೇಡಿಕೊಳ್ಳಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top