fbpx
ಸಮಾಚಾರ

ಈ ಊರಿನಲ್ಲಿ ಜನರೇ ಇಲ್ಲ,ಇಲ್ಲಿಗೆ ಹೋಗುವುದಕ್ಕೆ ಜನ ಹೆದರುವುದಾದರೂ ಯಾಕೆ,ಈ ಊರು ಯಾವುದು,ಇದರ ಹಿಂದಿನ ಭಯಾನಕ ರಹಸ್ಯವಾದರೂ ಏನು

ಆ ಊರಿನಲ್ಲಿ ಈಗ ಜನರೇ ಇಲ್ಲ.ಅಲ್ಲಿಗೆ ಹೋಗುವುದಕ್ಕೆ ಜನ ಯಾಕೆ ಹೆದರುತ್ತಾರೆ.ಯಾವುದು ಆ ಊರು ?
ಅದು ಭಾರತದ ಭಯಾನಕ ಸ್ಥಳ. ಆ ಊರನ್ನು ಘೋಸ್ಟ್ ಟೌನ್ ಎಂದೇ ಕರೆಯಲಾಗುತ್ತದೆ. ಪ್ರಕೃತಿಯ ಸೊಬಗಿನಿಂದ ಕೂಡಿರುವ ಈ ಸ್ಥಳ ಇವತ್ತು ಹಾಳು ಕೊಂಪೆಯಾಗಿದೆ . ಇವತ್ತಿಗೂ ಆ ಜಾಗದಲ್ಲಿ ಅತೃಪ್ತ ಆತ್ಮಗಳು ಓಡಾಡುತ್ತವೆ ಎಂದು ಸ್ಥಳೀಯರು ನಂಬಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರವೇ ಈ ಊರನ್ನು ಪುನರ್ ನಿರ್ಮಿಸದೇ ಕೈ ತೊಳೆದುಕೊಂಡು ಬಿಟ್ಟಿದೆ. ಒಂದು ಕಾಲದಲ್ಲಿ ಇತಿಹಾಸ ಮತ್ತು ಪುರಾಣಕ್ಕೆ ನೆಲೆಯನ್ನು ಒದಗಿಸಿದ್ದಕ್ಕಾಗಿ ಇವತ್ತು ಜನರೇ ಇಲ್ಲದೇ ಬಣಗುಡುತ್ತಿದೆ. ಅಲ್ಲಿಗೆ ಪ್ರವಾಸಿಗರು ಹೋಗುತ್ತಾರೆ ಆದರೆ ರಾತ್ರಿ ಹೊತ್ತು ಅಲ್ಲಿ ಉಳಿಯುವ ಧೈರ್ಯ ಯಾರೂ ಮಾಡುವುದಿಲ್ಲ.

 

 

 

ಆ ಸ್ಥಳ ಯಾವುದು ? ಅದು ಇರುವುದಾದರೂ ಎಲ್ಲಿ ? ಆ ಸ್ಥಿತಿಗೆ ಕಾರಣವಾದ ವಿಷಯವಾದರೂ ಏನು ? ಅಲ್ಲಿ ನಡೆದ ದುರಂತ ಹೇಗಿತ್ತು ?ಇವೆಲ್ಲಾ ಆಸಕ್ತಿದಾಯಕ ವಿಷಯಗಳನ್ನು ಈಗ ತಿಳಿದುಕೊಳ್ಳೋಣ ಬನ್ನಿ.
ರಾಮಸೇತುವೆಯ ಕಥೆ ಗೊತ್ತಲ್ಲವೇ ? ಸೇತುವೆ ಪ್ರಾರಂಭವಾಗುವುದು ಧನುಷ್ಕೋಟಿ ಎನ್ನುವ ಪ್ರದೇಶದಿಂದ. ಅ ಊರು ಭಾರತ ಮತ್ತು ಶ್ರೀಲಂಕಾ ನಡುವಿನ ಕೊಂಡಿಯಂತೆ ಬಿಂಬಿತವಾಗಿದೆ. ತ್ರೇತಾಯುಗದಲ್ಲಿ ರಾಮ ಲಂಕೆಗೆ ಹೋಗುವಾಗ ಈ ಪ್ರದೇಶವನ್ನು ದಾಟಿ ಹೋಗಿದ್ದನಂತೆ. ಧನುಷ್ಕೋಟಿ ರಾಮೇಶ್ವರಂ ದ್ವೀಪದ ಕಟ್ಟಕಡೆಯ ಊರು ಎಂದು ಗುರುತಿಸಿಕೊಂಡಿದೆ. ಇಂತಹ ಧನುಷ್ಕೋಟಿಗೆ ಮತ್ತೊಂದು ಹೆಸರಿದೆ. ಅದೇ ಘೋಸ್ಟ್ ಟೌನ್. ಅದೇ ಭಯಾನಕ ಸ್ಥಳ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿರುವ ಧನುಷ್ಕೋಟಿ. ಈ ದನುಷ್ಕೋಟಿಗೂ ದುರದೃಷ್ಟಕ್ಕೂ ಹತ್ತಿರದ ನಂಟು ಇದೆಯೋ ಏನೋ ? ಯಾಕೆಂದರೆ ಈ ಸ್ಥಳದಲ್ಲೇ ಸ್ವಾತಂತ್ರ್ಯದ ನಂತರ ಎರಡು ಮಾರಣಾಂತಿಕ ಪ್ರಕೃತಿ ವಿಕೋಪಗಳು ಸಂಭವಿಸಿದವು. 1948ರಲ್ಲಿ ಭೀಕರ ಚಂಡಮಾರುತ ಧನುಷ್ಕೋಟಿಯನ್ನು ಬಾರದ ರೀತಿಯಲ್ಲಿ ಕಾಡಿತ್ತು. ಆದರೆ ಅವತ್ತು ಅಲ್ಲಿದ್ದ ಜನ ಪ್ರಕೃತಿಯ ವಿಕೋಪದಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.ಈ ಘಟನೆ ನಡೆದ 15 ವರ್ಷಗಳ ನಂತರ ಅಂದರೆ 1964 ಡಿಸೆಂಬರ್ 22 ನೇ ತಾರೀಖಿನಂದು ನಡೆದ ಮತ್ತೊಂದು ದುರಂತದಲ್ಲಿ ಬರೋಬ್ಬರಿ ಸಾವಿರದ ಎಂಟು ನೂರು ಜನ ಪ್ರಾಣವನ್ನು ಕಳೆದುಕೊಂಡರು.

ಆ ದುರಂತ ಎಷ್ಟು ಭಯಾನಕವಾಗಿತ್ತು ಎಂದರೆ ಧನುಷ್ಕೋಟಿಯಲ್ಲಿ ಇಂತಹದೊಂದು ಘಟನೆ ನಡೆದಿತ್ತು ಎನ್ನುವುದು ಅಂದಿನ ಸರ್ಕಾರದ ಗಮನಕ್ಕೆ ಬರುವುದಕ್ಕೆ ಬರೋಬ್ಬರಿ ಮೂರು ದಿನ ಬೇಕಾಯಿತು. ಅದರ ಪರಿಣಾಮ ಹೇಗಿತ್ತು ಎಂದರೆ ನೀವೇ ಊಹಿಸಿಕೊಳ್ಳಿ. ಅವತ್ತು ಅಪ್ಪಳಿಸಿದ ಚಂಡಮಾರುತಕ್ಕೆ ಇದೇ ತಮಿಳುನಾಡು ನಲುಗಿ ಹೋಗಿತ್ತು. ವಿದ್ಯುತ್ ಸಂಪರ್ಕ ಕಡಿತವಾಗಿತ್ತು, ದೂರವಾಣಿ ಕಾರ್ಯ ನಿರ್ವಹಿಸುವುದನ್ನು ಸ್ಥಗಿತಗೊಳಿಸಿದ್ದವು. ಹೀಗಾಗಿ 1964 ಡಿಸೆಂಬರ್ 22 ಹಾಗೂ 23 ರ ಮಧ್ಯರಾತ್ರಿ ನಡೆದ ಘೋರ ದುರಂತ ಬೆಳಕಿಗೆ ಬಂದದ್ದು ಮೂರು ದಿನಗಳ ನಂತರ .

ಹೀಗಾಗಿಯೇ ಧನುಷ್ಕೋಟಿಗೆ ಹೋಗಿದ್ದರು ಹಿಂದಿರುಗಿ ಬಾರದೆ ಇದ್ದದ್ದನ್ನು ಅರಿತ ರೈಲ್ವೆ ಅಧಿಕಾರಿಗಳು ಧನುಷ್ಕೋಟಿಯ ಸ್ಥಿತಿಯನ್ನು ಜಗತ್ತಿಗೆ ತಿಳಿಯುವಂತೆ ಮಾಡಿದರು. ಧನುಷ್ಕೋಟಿ ಮತ್ತು ರಾಮೇಶ್ವರಂ ನಡುವೆ ಸಂಚರಿಸುತ್ತಿದ್ದ ರೈಲು ಅಂದು ಸಮುದ್ರದ ಅಲೆಗೆ ಬಲಿಯಾಗಿ ಹೋಗಿತ್ತು. ಸರಿ ಸುಮಾರು 115 ಮಂದಿ ಜಲಸಮಾಧಿಯಾದರೂ, ಬಂಗಾಳಕೊಲ್ಲಿಯಲ್ಲಿ 25 ಮೀಟರ್ ಎತ್ತರದ ಅಲೆಗಳು ಮೇಲಕ್ಕೆದ್ದವು. ಧನುಷ್ಕೋಟಿ ಚಂಡಮಾರುತದಿಂದ ತತ್ತರಿಸಿ ಹೋಗಿತ್ತು. ಅಲ್ಲಿನ ಜನ ಜೀವ ಉಳಿಸಿಕೊಳ್ಳುವುದಕ್ಕೆ ಆಸ್ಪದವನ್ನು ಕೊಡದೆ ಅಲ್ಲಿದ್ದ ಸಾವಿರದ ಎಂಟು ನೂರಕ್ಕೂ ಅಧಿಕ ಮಂದಿಯನ್ನು ಸಮುದ್ರ ಬಲಿತೆಗೆದುಕೊಂಡಿತ್ತು. ಈ ಘಟನೆ ನಡೆದ ನಂತರ ತಮಿಳುನಾಡಿನ ಸರ್ಕಾರ ಈ ಸ್ಥಳದಲ್ಲಿ ಜನ ವಸತಿಯನ್ನು ಪುನರ್ ಸ್ಥಾಪಿಸುವುದು ಬೇಡ ಎಂದು ನಿರ್ಧರಿಸಿ ಬಿಟ್ಟಿತ್ತು. ಹಾಗೇನಾದರೂ ಮಾಡಿದರೆ ಮತ್ತಷ್ಟು ಜನರನ್ನು ಬಲಿ ಕೊಡಬೇಕಾಗಿ ಬರುತ್ತದೆ ಎನ್ನುವ ಭಯ ಅವರಿಗೆ ಕಾಡಿತ್ತು.

 

 

 

ಧನುಷ್ಕೋಟಿಯಲ್ಲಿ 1964ರ ದುರಂತ ನಡೆದ ನಂತರ ಅದೆಷ್ಟೋ ಜನರ ಶವಗಳಿಗೆ ಸಂಸ್ಕಾರವೇ ನಡೆಯಲಿಲ್ಲ, ಹೀಗಾಗಿ ಅವರ ಆತ್ಮಗಳೆಲ್ಲಾ ಅಲ್ಲೇ ಒದ್ದಾಡುತ್ತಿವೆ ಅಲೆದಾಡುತ್ತಾ ಇವೆ ಎಂದು ಜನ ನಂಬಿಕೊಂಡು ಕುಳಿತಿದ್ದಾರೆ.
ಸಾಕಷ್ಟು ಜನ ಕೆಲವೊಮ್ಮೆ ಇದನ್ನು ಪರೀಕ್ಷೆ ಮಾಡಲು ಹೋಗಿ ವಿಚಿತ್ರ ಅನುಭವಗಳನ್ನು ಕೂಡ ಪಡೆದುಕೊಂಡು ಹಿಂತಿರುಗಿದ್ದಾರೆ. ಹಾಗಾಗಿಯೇ ಧನುಷ್ಕೋಟಿಗೆ ಸೂರ್ಯ ಮುಳುಗಿದ ನಂತರ ಯಾರೂ ಹೋಗುವುದಿಲ್ಲ. ಹಾಗೇನಾದರೂ ಅಲ್ಲಿ ಯಾರು ಇಲ್ಲದನ್ನು ಕಂಡು ಘೋಷ್ಟ್ ಸಿಟಿ ಎಂದು ಘೋಷಿಸಿ ಬಿಟ್ಟಿತ್ತು ಅಂದಿನ ಸರ್ಕಾರ. ಇವತ್ತು ಧನುಷ್ಕೋಟಿಯಲ್ಲಿ ಓಡಾಡಿದರೆ ಅಲ್ಲಿದ್ದ ಜನರ ಪಳೆಯುಳಿಕೆಗಳು ಚರ್ಚ್ ಹಾಗೂ ದೇವಾಲಯಗಳ ಅಳಿದುಳಿದ ಭಾಗಗಳು ಜನರನ್ನು ಸಾಕಷ್ಟು ಕಾಡುತ್ತವೆ. ಹಾಗಾಗಿ ಹೆಚ್ಚು ಜನ ಇಲ್ಲಿಗೆ ಹೋಗುವುದಿಲ್ಲ. ಇಷ್ಟರ ಮೇಲೆ ಒಮ್ಮೆಯಾದರೂ ಧನುಷ್ಕೋಟಿಯನ್ನು ನೋಡಬೇಕು ಅನಿಸುತ್ತದೆ. ಯಾಕೆಂದರೆ ಅದು ಶ್ರೀ ರಾಮ ನಡೆದಾಡಿದ ಸ್ಥಳ.ಕಿಷ್ಕಿಂಧೆಯಲ್ಲಿ ಹನುಮ ಮತ್ತು ಅವನ ವಾನರ ಸೇನೆ ಸೇತುವೆ ಕಟ್ಟಿದ ಜಾಗವದು. ಅದು ಶ್ರೀಲಂಕದ ಕಡೆಗೆ ಭಾರತದ ಕಟ್ಟಕಡೆಯ ಮಾರ್ಗ ಹಾಗಾಗಿ ನಮ್ಮನ್ನು ಇನ್ನಿಲ್ಲದಂತೆ ತನ್ನತ್ತ ಸೆಳೆಯುತ್ತದೆ. ಈ ಧನುಷ್ಕೋಟಿಗೆ 2004ರಲ್ಲಿ ಮತ್ತೊಂದು ಕಂಟಕ ಎದುರಾಗಿತ್ತು. ಡಿಸೆಂಬರ್ 26 2004ರಲ್ಲಿ ಅಪ್ಪಳಿಸಿದ ಸುನಾಮಿ ಇಲ್ಲಿ ಸಾಕಷ್ಟು ಹಾನಿಯನ್ನು ಉಂಟು ಮಾಡಿತ್ತು. ಆದರೆ ಅದೃಷ್ಟವಶಾತ್ ಅಂದು ಅಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಅದೊಂದು ಮಹಾ ದುರಂತದ ದಿನಗಳಲ್ಲಿಯೂ ಯಾವ ಪ್ರಾಣಾಪಾಯವೂ ಸಂಭವಿಸಲಿಲ್ಲ. ಇದೆಲ್ಲ ಏನೇ ಇದ್ದರೂ ಇವತ್ತು ಧನುಷ್ಕೋಟಿಗೆ ಮಹಾದುರಂತದ ಕಪ್ಪುಚುಕ್ಕೆಯಾಗಿ ಉಳಿದುಕೊಂಡಿರುವುದು ಸುಳ್ಳಲ್ಲ. ಇದು ಭಾರತದ ಅತಿ ಭಯಾನಕ ಸ್ಥಳಗಳಲ್ಲಿ ಒಂದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top