fbpx
ಸಮಾಚಾರ

ಹಾಸನದ ಶಶಿವಾಳ ಬಳಿ ಅಮೂಲ್ಯ ನಿಕ್ಷೇಪ ಪತ್ತೆ – ಜಮೀನು ಕಳೆದುಕೊಳ್ಳುವರ ನಮ್ಮ ರೈತರು?

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಶಶಿವಾಳ ಗ್ರಾಮದ ಬಳಿ ಅಮೂಲ್ಯ ನಿಕ್ಷೇಪ ಪತ್ತೆಯಾಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ‌.‌ ಇದನ್ನು ಖಚಿತ ಪಡಿಸಿಕೊಳ್ಳಲು ಕಳೆದ ಎರಡು ತಿಂಗಳಿನಿಂದ ‘ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ’ ದವರು ಗ್ರಾಮದ ಸುತ್ತಾಮುತ್ತಾ ಸರ್ವೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬೆಳವಣಿಗೆಗಳಿಂದ ರೈತರು ಜಮೀನು ಕಳೆದುಕೊಳ್ಳುವ ಆತಂಕಕ್ಕೊಳಗಾಗಿದ್ದಾರೆ ಎಂಬುದು ತಿಳಿದು ಬರುತ್ತಿದೆ.

ಅಪರೂಪದ ನಿಕ್ಷೇಪ ಈ ಭಾಗದ ಭೂಮಿಯಲ್ಲಿರುವುದು ಪತ್ತೆಯಾಗಿರುವ ಕಾರಣದಿಂದ ಜಿಯೋಲಾಜಿಕಲ್ ಇಲಾಖೆ ಅಧಿಕಾರಿಗಳು ಮಾರ್ಕಿಂಗ್ ಮಾಡುತ್ತಿದ್ದಾರಂತೆ ಇದರಿಂದಾಗಿ ರೈತರು ತಮ್ಮ ಭೂಮಿ ಎಲ್ಲಿ ಕೈ ತಪ್ಪಿ ಹೋಗುವುದೋ ಎಂಬ ಆತಂಕದಲ್ಲಿದ್ದಾರಂತೆ.

ಈ ಕುರಿತು ಮಾತನಾಡಿದ ರೈತ ಕುಮಾರ್ ರವರು “ಯಾವ ಮಾಹಿತಿ ನೀಡದೆ, ಗ್ರಾಮಸಭೆಗೂ ತಿಳಿಸದೆ ಏಕಾಏಕಿ ಅಧಿಕಾರಿಗಳು ನಮ್ಮ ಜಮೀನುಗಳಿಗೆ ಬಂದು ಈ ರೀತಿ ಸರ್ವೆ ಮಾಡುತ್ತಿರುವ ಕ್ರಮ ಸರಿಯಲ್ಲ ” ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಶಶಿವಾಳ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆದಿರುವುದಾಗಿ ತಿಳಿದು ಬಂದಿದ್ದು, ಯಾವುದೇ ಕಾರಣಕ್ಕೂ ನಮ್ಮ ಜಮೀನುಗಳನ್ನು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಕುಳಿತಿದ್ದಾರಂತೆ.

ಈ ಕುರಿತು ತಹಶೀಲ್ದಾರ್ ನಟೇಶ್ ಪ್ರತಿಕ್ರಿಯೆ ನೀಡಿ, “ದೇಶದೆಲ್ಲೆಡೆ ನಿಕ್ಷೇಪ ಇರುವ ಬಗ್ಗೆ ಜಿಯೋಲಾಜಿಕಲ್ ಇಲಾಖೆಯವರು ಸರ್ವೆ ನಡೆಸುತ್ತಾರೆ. ಅದೇ ರೀತಿ ಈ ಭಾಗದಲ್ಲೂ ಸರ್ವೆ ನಡೆಸುತ್ತಿದ್ದಾರೆ. ಯಾವ ನಿಕ್ಷೇಪ ಇದೆ ಎಂದು ತಿಳಿದುಬಂದಿಲ್ಲ” ಎಂದು ಸ್ಪಷ್ಟ ಪಡಿಸಿದ್ದಾರೆ.

ಶಶಿವಾಳ ಗ್ರಾಮದಲ್ಲಿ ಕಳೆದೆರಡು ತಿಂಗಳಿನಿಂದ ಅಧಿಕಾರಿಗಳು ಜಮೀನು, ಇನ್ನಿತರ ಭಾಗಗಳಲ್ಲಿ ಸರ್ವೆ ನಡೆಸುತ್ತಿರುವುದರಿಂದ ರೈತರಲ್ಲಿ ಸಹಜವಾಗಿ ಕುತೂಹಲ ಮೂಡಿದ್ದು, ನಮ್ಮ ಭೂಮಿಯಲ್ಲಿ ಏನಿರಬಹುದೆಂಬ ಸಂಶಯ ಮೂಡಿದಿಯಂತೆ! ಅದಕ್ಕಿಂತ ಹೆಚ್ಚಾಗಿ ಜಮೀನು ಎಲ್ಲಿ ಕೈ ಜಾರಿ ಹೋಗುವುದೋ ಎಂಬ ಆತಂಕ ಅವರನ್ನು ಕಾಡುತ್ತಿದೆಯಂತೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದ್ದು ಈ ವಿಚಾರದ ಕುರಿತಾಗಿನ ಮುಂದಿನ ನಿರ್ಧಾರವನ್ನು ರೈತ ಸಂಘದ ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಕೈಗೊಳ್ಳುತ್ತೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top