ಸಮಾಚಾರ

ಮೃತ ಮಹಿಳೆಯ ಗರ್ಭಕೋಶ ಕಸಿ ಮಾಡಿದ ಮಹಿಳೆಗೆ ಹೆಣ್ಣುಮಗು ಜನನ – ಇಡೀ ವೈದ್ಯ ಲೋಕ ಅಚ್ಚರಿಯಲ್ಲಿ

ಯುಎಸ್​, ಜೆಕ್​ ಗಣರಾಜ್ಯ ಹಾಗೂ ಟರ್ಕಿ ದೇಶಗಳಲ್ಲಿ ಮೃತರ ಗರ್ಭಕೋಶವನ್ನು ಇನ್ನೊಬ್ಬ ಮಹಿಳೆಗೆ ಕಸಿ ಮಾಡಿದ ಸುಮಾರು 10 ಪ್ರಕರಣಗಳ ಕುರಿತ ವಿಚಾರಗಳು ಕೇಳಿ ಬಂದಿತ್ತು.ಆದರೆ ದುರದೃಷ್ಟ ವಶಾತ್ ಗರ್ಭಕೋಶ ಕಸಿ ಮಾಡಿಸಿಕೊಂಡ ಯಾವ ಮಹಿಳೆಯು ಮಗುವಿಗೆ ಜನ್ಮ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಬ್ರೆಜಿಲ್ ನಲ್ಲಿ ಮೃತಪಟ್ಟ ಮಹಿಳೆಯ ಗರ್ಭಕೋಶ ಕಸಿ ಮಾಡಲಾಗಿದ್ದ ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದು ವಿಶ್ವದಲ್ಲೇ ಮೊದಲ ಪ್ರಕರಣವಾಗಿದೆ ಎಂಬ ಸುದ್ದಿ ಇದೀಗ ಬೆಳಕಿಗೆ ಬಂದಿದೆ. ಈ ಮೂಲಕ ಇಡೀ ವೈದ್ಯಲೋಕ ಅಚ್ಚರಿಗೆ ಒಳಗಾಗಿದೆ.

ಗರ್ಭಕೋಶ ಕಸಿ ಮಾಡಿಸಿಕೊಂಡ ಮಹಿಳೆ ಗರ್ಭ ಧರಿಸಿದ 35 ವಾರಗಳಲ್ಲಿ ವೈದ್ಯರು ಮಗುವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದು ಮಗು ಸುಮಾರು 2,550 ಗ್ರಾಂ ತೂಕವಿದೆ ಎಂದು ಅಲ್ಲಿನ ವೈದ್ಯಕೀಯ ಜರ್ನಲ್​ ವರದಿ ಮಾಡಿದೆ.

‘ಅಸಲಿಗೆ ಕಸಿ ಮಾಡಿಸಿಕೊಂಡ ಮಹಿಳೆ ಗರ್ಭಕೋಶವೇ ಇಲ್ಲದೆ ಜನಿಸಿದ್ದರು. ಹಾಗೂ ತಮ್ಮ 32 ನೇ ವರ್ಷದಲ್ಲಿ ಮಗು ಪಡೆಯಬೇಕು ಎಂಬ ಆಸೆ ಹೊಂದಿದ್ದರು. ಹಾಗಾಗಿ 2016ರ ಸೆಪ್ಟೆಂಬರ್​ನಲ್ಲಿ ಇವರಿಗೆ ಕಸಿ ಮಾಡಲಾಗಿತ್ತು. ಸ್ಟ್ರೋಕ್​ನಿಂದ ಮೃತಪಟ್ಟ 45 ವರ್ಷದ ಮಹಿಳೆಯ ಕುಟುಂಬಸ್ಥರು ಆಕೆಯ ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದರಿಂದ ಅವರ ಗರ್ಭಾಶಯವನ್ನೇ ಈ ಮಹಿಳೆಗೆ ಹಾಕಲಾಗಿತ್ತು’ ಎಂದು ಈ ಒಂದು ಯಶಸ್ವೀ ಪ್ರಯತ್ನದ ರೂವಾರಿ ಬ್ರೆಜಿಲ್ ನ ​ ಸಾವ್ ಪಾಲೊ ಯೂನಿವರ್ಸಿಟಿ ಆಸ್ಪತ್ರೆಯ ವೈದ್ಯ ಡನಿ ಎಝೆನ್​ಬರ್ಗ್ ಹೇಳಿದ್ದಾರೆ.

ಕಸಿ ಮಾಡಿದ ಬಳಿಕ ಅವರು  ಋತುಚಕ್ರ ಹೊಂದುತ್ತಿದ್ದರು. ಸ್ಕ್ಯಾನಿಂಗ್​ ಮಾಡಿದಾಗ ಎಲ್ಲವೂ ಸರಿಯಾಗಿತ್ತು. ಏಳು ತಿಂಗಳ ಬಳಿಕ ಫ್ರಾಝನ್​ ಮೊಟ್ಟೆಗಳನ್ನು ಕಸಿ ಮಾಡಲಾಗಿತ್ತು. ಅದಾದ 10 ದಿನದಲ್ಲಿ ಆಕೆ ಗರ್ಭಿಣಿಯಾಗಿದ್ದರು ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top