ಸಮಾಚಾರ

ಬೆಂಗಳೂರಿನಲ್ಲಿ ಬಂದ್ ಆದ ಮತ್ತೊಂದು ಸಿಂಗಲ್ ಸ್ಕ್ರೀನ್ ಥಿಯೇಟರ್

ಬೆಂಗಳೂರಿನಲ್ಲಿ ಇತ್ತೀಚಿಗೆ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ಕಣ್ಮರೆಯಾಗುತ್ತಿದ್ದು, ಆ ಜಾಗಗಳಲ್ಲಿ ಮಲ್ಟಿಪ್ಲೆಕ್ಸ್ ಗಳು ತಮ್ಮ ಸಾರಭೌಮತ್ವವನ್ನು ಸ್ಥಾಪಿಸುತ್ತಿವೆ. ಈಗಾಗಲೇ ಸಾಲು ಸಾಲಾಗಿ ಅನೇಕ ಸ್ಕ್ರೀನ್ ಥಿಯೇಟರ್ ಗಳು ಮಣ್ಣಲ್ಲಿ ಮಣ್ಣಾಗಿ ಇತಿಹಾಸದ ಪುಟಕ್ಕೆ ಸೇರಿ ಹೋಗಿದ್ದು. ಇದೀಗ ವಿಪರ್ಯಾಸವೆಂಬಂತೆ ಬೆಂಗಳೂರಿನಲ್ಲಿರುವ ಮತ್ತೊಂದು ಫೇಮಸ್ ಥಿಯೇಟರ್ ಇನ್ನೂ ಮುಂದೆ ನಮ್ಮ ನಿಮ್ಮೆಲ್ಲರ ಪಾಲಿಗೆ ಕೇವಲ ನೆನಪಾಗಿ ಉಳಿದು ಹೋಗಲಿದೆ.

ಹೌದು, ಬ್ರಿಗೆಡ್ ರಸ್ತೆಯಲ್ಲಿರುವ ಪ್ರಸಿದ್ಧ ‘ರೆಕ್ಸ್‘ ಚಿತ್ರಮಂದಿರವು ಇನ್ನೇನು ಕಣ್ಮರೆಯಾಗುವ ಹಂತ ತಲುಪಿದೆ. ಆಗಿನ ಕಾಲದಿಂದಲೂ ಹಾಲಿವುಡ್ ಚಿತ್ರಗಳ ಪ್ರದರ್ಶನಕ್ಕಾಗಿ ಹೆಸರುವಾಸಿಯಾಗಿದ್ದ ಈ ಥಿಯೇಟರ್ ಇಂದಿಗೂ ಎಷ್ಟೋ ಜನರ ಫೇವರಿಟ್. ಭಾಷಾ ಬೇಧ-ಭಾವವಿಲ್ಲದೆ ಕನ್ನಡ,ಹಿಂದಿ, ತಮಿಳು ಹಾಗೂ ತೆಲುಗು ಸಿನಿಮಾಗಳು ಇಲ್ಲಿ ಪ್ರದರ್ಶನ ಕಾಣುತ್ತಿದ್ದವು ಹಾಗೂ ಎಷ್ಟೋ ಸಿನಿಮಾಗಳು ಈ ಚಿತ್ರಮಂದಿರದಲ್ಲಿ ಹೆಚ್ಚು ದಿನಗಳ ಕಾಲ ಓಡಿ ದಾಖಲೆ ಬರೆದಿರುವ ಇತಿಹಾಸವು ಉಂಟು. ಅದರೊಂದಿಗೆ ವಿಶೇಷ ಏನೆಂದರೆ ಈ ಥಿಯೇಟರ್ ನಲ್ಲಿ ಪದರ್ಶನವಾಗುತ್ತಿದ್ದ ಹಾಲಿವುಡ್ ಸಿನಿಮಾಗಳನ್ನು ನೋಡಲು ಥಿಯೇಟರ್ ನತ್ತ ಶಿವಣ್ಣ, ಪುನೀತ್, ಕುಮಾರ್ ಬಂಗಾರಪ್ಪ, ಸಿಹಿಕಹಿ ಚಂದ್ರು ಸೇರಿದಂತೆ ಅನೇಕ ಕಲಾವಿದರು ಸಹ ಬರುತ್ತಿದ್ದರಂತೆ.

ಇದುವರೆಗೂ ಈ ಚಿತ್ರ ಮಂದಿರದಲ್ಲಿ ‘ಎಂದಿರನ್’, ‘ಬಾಹುಬಲಿ’, ‘ಭರ್ಜರಿ’, ಸೇರಿದಂತೆ ಅನೇಕ ಚಿತ್ರಗಳು ಯಶಸ್ವಿ ಪ್ರದರ್ಶನವನ್ನು ಕಂಡಿವೇ.

ಕಳೆದ ವಾರವಷ್ಟೇ ಈ ಥಿಯೇಟರ್ ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘2.0’ ಸಿನಿಮಾ ತೆರೆಕಂಡಿತ್ತು. ಮುಂದಿನವಾರ ಅಂದರೆ, ಡಿಸೆಂಬರ್ 21 ರಂದು ಕನ್ನಡದ ‘ಕೆಜಿಎಫ್’ ಮತ್ತು ‘ಜೀರೋ’ ಚಿತ್ರಗಳು ಇಲ್ಲಿಯೂ ತೆರೆಗೆ ಬರಲಿದ್ದು, ಈ ಚಿತ್ರಗಳ ಮೂಲಕ ‘ರೆಕ್ಸ್’ ಥಿಯೇಟರ್ ತನ್ನ ಕೊನೆಯ ಪ್ರದರ್ಶನಕ್ಕೆ ತೆರೆ ಎಳೆಯಲಿದ್ದು ನೆನಪಿನ ಖಾತೆಯಲ್ಲಿ ಭದ್ರವಾಗಿ ಉಳಿದು ಹೋಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top