ಸಮಾಚಾರ

ಈ ಕಾರಣಕ್ಕೆ ಈ ಬಾರಿ ರಾಹುಲ್‌ ದ್ರಾವಿಡ್‌ ಮತದಾನ ಮಾಡುವಂತಿಲ್ಲ- ಚುನಾವಣಾ ರಾಯಭಾರಿಗೇ ಇಲ್ಲ ಮತದಾನ ಹಕ್ಕು.

ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೆಸರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿರುವುದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅವರು ಮತದಾನ ಮಾಡುವುದು ಅಸಾಧ್ಯವಾಗಿದೆ. 2018ರ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರಿಗೆ ತಪ್ಪದೇ ಮತ ಚಲಾಯಿಸುವಂತೆ ಮತದಾನದ ಜಾಗೃತಿ ಮೂಡಿಸಿದ ರಾಹುಲ್​ ದ್ರಾವಿಡ್​ಗೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ. ಆಶ್ಚರ್ಯವಾದರೂ ಇದು ಸತ್ಯ.

ದ್ರಾವಿಡ್ ಇಂದಿರಾನಗರದಿಂದ ತಮ್ಮ ವಾಸ್ತವ್ಯವನ್ನು ಬದಲಾವಣೆ ಮಾಡಿದ್ದು, ಪರಿಣಾಮ ಕ್ಷೇತ್ರದ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಕೈ ಬಿಡಲಾಗಿದೆ. ಇಂದಿರಾನಗರದಲ್ಲಿದ್ದ ರಾಹುಲ್​ ಕುಟುಂಬ ಈಗ ಅಶ್ವತ್ಥ್‌ನಗರಕ್ಕೆ ಸ್ಥಳಾಂತರಗೊಂಡಿದೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಲು ಸರಿಯಾದ ವೇಳೆಗೆ ಫಾರ್ಮ್‌ 6 ಅನ್ನು ಸಲ್ಲಿಸಿಲ್ಲದಿರುವುದರಿಂದ ಮತದಾನ ಪಟ್ಟಿಯಿಂದ ರಾಹುಲ್‌ ದ್ರಾವಿಡ್‌ ಹೆಸರು ಮತ್ತೆ ಸೇರ್ಪಡೆಯಾಗಿಲ್ಲ.

ಪ್ರತಿ ಬಾರಿಯೂ ತಪ್ಪದೇ ಮತದಾನ ಮಾಡುತ್ತಿದ್ದ ರಾಹುಲ್ ದ್ರಾವಿಡ್ ಈ ಬಾರಿ ಮತದಾನ ಮಾಡುವಂತಿಲ್ಲ. ವಿಳಾಸ ಬದಲಾವಣೆಯಾದರೂ ಫಾರ್ಮ್ 6 ನ್ನು ಸರಿಯಾದ ಸಮಯಕ್ಕೆ ಸಲ್ಲಿಸದೇ ಇದ್ದದ್ದು ಇದಕ್ಕೆ ಕಾರಣ.

ಮತದಾನ ಪಟ್ಟಿಯ ಕರಡು ಪ್ರತಿಯನ್ನು ಜ. 16ರಂದು ಬಿಡುಗಡೆ ಮಾಡಲಾಯಿತು. ಮಾ. 16ರೊಳಗೆ ಮತದಾರರ ಹೆಸರು ಸೇರಿಸಲು ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು ಎಂದು ದೊಮ್ಮಲೂರು ಉಪವಿಭಾಗದ ಸಹಾಯಕ ಚುನಾವಣಾಧಿಕಾರಿ ಬಸವರಾಜು ಮಾಗಿ ತಿಳಿಸಿದ್ದಾರೆ.

ಮತ್ತಿಕೆರೆ ಉಪ ವಿಭಾಗದ ಸಹಾಯಕ ಚುನಾವಣಾಧಿಕಾರಿ ರೂಪಾ ಪ್ರತಿಕ್ರಿಯಿಸಿ, ಬೂತ್‌ ಮಟ್ಟದ ಅಧಿಕಾರಿಗಳು ದ್ರಾವಿಡ್‌ ಮನೆಗೆ ತೆರಳಿದ್ದರು. ಎರಡು ಬಾರಿ ತೆರಳಿದ್ದಾಗಲೂ ಮನೆಯೊಳಗಡೆ ಅವರಿಗೆ ಪ್ರವೇಶ ನೀಡಿಲ್ಲ. ಈ ಬಗ್ಗೆ ವಿದೇಶ ಪ್ರವಾಸದಲ್ಲಿದ್ದ ದ್ರಾವಿಡ್‌ಗೆ ತಿಳಿಸಿದಾಗ ಅವರಿಂದಲೂ ಯಾವುದೇ ಪ್ರತಿಕ್ರಿಯೆ ಲಭ್ಯವಾಗಲಿಲ್ಲ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top