fbpx
ಸಮಾಚಾರ

“ಅಗತ್ಯ ಬಿದ್ದರೆ ಮುಸ್ಲಿಮರು ಬಿಜೆಪಿ ಜೊತೆ ಕೈಜೋಡಿಸಬೇಕು” ಸಿದ್ದು, ದಿನೇಶ್ ವಿರುದ್ಧ ರೋಷನ್ ಬೇಗ್ ವಾಗ್ದಾಳಿ.

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಬಗ್ಗೆ ಎಕ್ಸಿಟ್‌ ಪೋಲ್‌ಗಳಲ್ಲಿ ಬರುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ರೋಷನ್‌ ಬೇಗ್‌ ಕಿಡಿಕಾರಿದ್ದಾರೆ. ರೋಷನ್​ ಬೇಗ್ ಬಹಿರಂಗವಾಗಿ ರಾಜ್ಯ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು ತಾವು ಪಕ್ಷ ಬಿಡಲು ಸಿದ್ಧ ಎಂದು ಹೇಳಿಕೆ ನೀಡಿರುವುದು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. ಜತೆಗೆ ಸಂದರ್ಭ ಬಂದರೆ ಮುಸಲ್ಮಾನರು ಎನ್‌ಡಿಎಗೆ ಬೆಂಬಲಿಸುವ ನಿಲುವನ್ನೂ ತೆಗೆದುಕೊಳ್ಳಬೇಕಾಗುತ್ತದೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣಾ ಪ್ರಚಾರದ ಬಗ್ಗೆ ತೀರಾ ಅಸಮಾಧಾನ ವ್ಯಕ್ತಪಡಿಸಿದ ಬೇಗ್, ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಸೋತರೆ ಅದಕ್ಕೆ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರೇ ನೇರ ಕಾರಣ ಎಂದಿದ್ದಾರೆ. ಸಮಯ, ಸಂದರ್ಭ ನೋಡಿ ನಾವು (ಮುಸ್ಲಿಮರು) ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ, ಅವಶ್ಯಕತೆಬಿದ್ದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಬೆಂಬಲಿಸಲು ನಾವು ಹಿಂಜರಿಯುವುದಿಲ್ಲ ಎನ್ನುವ ಎಚ್ಚರಿಕೆಯನ್ನು ರೋಷನ್ ಬೇಗ್ ನೀಡಿದ್ದಾರೆ.

‘ಸ್ವಾಭಿಮಾನದ ರಕ್ಷಣೆಯಾದರೆ ಮುಸ್ಲಿಮರು ಬೆಂಬಲಿಸುತ್ತಾರೆ. ಅವರನ್ನು ಊಳಿಗದ ಆಳುಗಳಂತೆ ನೋಡಿಕೊಂಡರೆ ಪರ್ಯಾಯ ಮಾರ್ಗದ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಸರಕಾರ ರಚನೆಯಾಗಲಿದೆ. ಈ ಸಂದರ್ಭದಲ್ಲಿ ಮುಸ್ಲಿಮರೂ ತಮ್ಮ ಭವಿಷ್ಯದ ಬಗ್ಗೆ ಯೋಚಿಸಬೇಕಾಗುತ್ತದೆ. ಅಗತ್ಯ ಕಂಡರೆ ಎನ್‌ಡಿಎಗೆ ಬೆಂಬಲಿಸುವ ಬಗ್ಗೆಯೂ ಪರಿಶೀಲಿಸಬೇಕಾಗುತ್ತದೆ,” ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಟೀಕಾಪ್ರಹಾರ ನಡೆಸಿರುವ ಅವರು, “ಚುನಾವಣಾ ನಾಯಕತ್ವ ವಹಿಸಿದ್ದ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರೂ ಸಹ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ. ಪರಿಣಾಮ ಜನ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ಅಸಮಾಧಾನದಿಂದ ಕಾಂಗ್ರೆಸ್ ಅನೇಕ ಸ್ಥಾನಗಳನ್ನು ಕಳೆದುಕೊಳ್ಳಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top