fbpx
ಸಮಾಚಾರ

ಗುಡಿಸಿಲಿನಲ್ಲಿ ವಾಸಿಸುವ ಈ ಸೈಕಲ್‌ ಸವಾರ ಈಗ ಸಂಸದ.

ಸಂಸದ ಅಥವಾ ಮಾಜಿ ಸಂಸದ ಎಂಬ ಪದ ಕೇಳುತ್ತಿದ್ದಂತೆಯೇ ಓರ್ವ ಸಂಪತ್ತು ಹೊಂದಿರುವ, ಐಷಾರಾಮಿ ಜೀವನ ಸಾಗಿಸುವ ವ್ಯಕ್ತಿಯ ಚಿತ್ರಣ ಮನದಲ್ಲಿ ಮೂಡುತ್ತದೆ. ಆದರೇ ಸರಳ ಜೀವನಶೈಲಿಯಿಂದ ಗಮನಸೆಳೆಯುತ್ತಿರುವ ಪ್ರತಾಪ ಸಿಂಗ್‌ ಸಾರಂಗಿ ಒಡಿಶಾದ ಬಾಲಸೋರ್‌ ಕ್ಷೇತ್ರದ ಬಿಜೆಪಿ ಸಂಸದ. ಇವರಿಗೆ ದೊಡ್ಡ ಮೊತ್ತದ ಆಸ್ತಿಯಿಲ್ಲ. ಬೃಹತ್‌ ಬಂಗಲೆಯಿಲ್ಲ. ನಿತ್ಯ ಸೈಕಲ್‌ನಲ್ಲಿಯೇ ಸಂಚಾರ. ಗುಡಿಸಲಿನಲ್ಲಿ ವಾಸ. ಅವಿವಾಹಿತ. ಜೊತೆಗೆ ವಾಸವಿದ್ದ ತಾಯಿ ಕಳೆದ ವರ್ಷವಷ್ಟೇ ನಿಧನರಾದರು.

ಚುನಾವಣೆಗಾಗಿ ಹಣವನ್ನು ಸುರಿಯದೆ, ಕಾಲ್ನಡಿಗೆಯಲ್ಲೇ ಪ್ರಚಾರ ಮಾಡಿದ ಸಾರಂಗಿ, ಹಣ ಮತ್ತು ಅದ್ಧೂರಿ ಪ್ರಚಾರವೇ ಚುನಾವಣೆಯ ಗೆಲುವಿಗೆ ಮಾನದಂಡವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ನಾನಾ ಸೇವಾ ಕಾರ್ಯಗಳಲ್ಲಿ ಪಾಲ್ಗೊಂಡು, ಹಳ್ಳಿ ಹಳ್ಳಿಗಳಿಗೆ ತೆರಳಿ ಜನರ ಕಷ್ಟ ಅರಿತಿದ್ದಾರೆ. ಅವರ ನೈಜ ಕಾಳಜಿಗೆ ಮತದಾರ ಒಲಿದು, ಅವರನ್ನು ಸಂಸತ್ತಿಗೆ ಕಳಿಸಲು ಅಣಿಗೊಳಿಸಿದ್ದಾನೆ.

12,956 ಮತಗಳ ಅಂತರದಿಂದ ಗೆಲುವು:
ಬಾಲಸೋರ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಡಿಯ ರವೀಂದ್ರ ಕುಮಾರ್ ಜೆನಾ ವಿರುದ್ಧ 12,956 ಮತಗಳ ಅಂತರದಿಂದ ಗೆದ್ದಿದ್ದಾರೆ. ಬಾಲಸೋರ್ ಕ್ಷೇತ್ರದಲ್ಲಿ 1998, 1999 ಮತ್ತು 2004 ಈ ಮೂರು ಅವಧಿಯನ್ನು ಬಿಟ್ಟರೆ ಬಿಜೆಪಿ ಮತ್ತೆಂದೂ ಗೆಲುವು ಸಾಧಿಸಿರಲಿಲ್ಲ. 2014 ರಲ್ಲಿ ರಬೀಂದ್ರ ಜೈನ್ ಅವರ ವಿರುದ್ಧವೇ ಸ್ಪರ್ಧಿಸಿ ಸೋತಿದ್ದ ಸಾರಂಗಿ ಈ ಬಾರಿ ಗೆಲುವು ಸಾಧಿಸಿದರು. ಇದಕ್ಕೂ ಮುನ್ನ ಅವರು 2004 ಮತ್ತು 2009 ರಲ್ಲಿ ನಿಲಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಗುಡಿಸಲಿನಲ್ಲಿ ವಾಸಿಸುವ ಅವರು ಸರಳ ಜೀವಿ. ತಮ್ಮ ಜೀವನವನ್ನೇ ಸಮಾಜ ಸೇವೆಗಾಗಿ ಮೀಸಲಿಟ್ಟವರು. ಚುನಾವಣೆ ಫಲಿತಾಂಶದ ನಂತರ ಅವರು ಜಯಗಳಿಸಿರುವ ವಿಷಯ ತಿಳಿದ ಮೇಲೆ ಅವರ ಫೋಟೋಗಳ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸರಳ ಜೀವನಕ್ಕೆ ಮಾದರಿ ಎಂದು ಜನ ಮೆಚ್ಚುಗೆ ಗಳಿಸುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top