fbpx
ಸಮಾಚಾರ

ಪತ್ರಕರ್ತನಿಗೆ ಹೊಡೆದು ಬಾಯಿಗೆ ಮೂತ್ರ ಮಾಡಿ ಅಮಾನವೀಯತೆ ಮೆರೆದ ಪೊಲೀಸರು!

ಗೂಡ್ಸ್ ರೈಲು ಹಳಿ ತಪ್ಪಿದ್ದ ಸುದ್ದಿಯನ್ನು ವರದಿ ಮಾಡಲು ಹೋಗಿದ್ದ ಪತ್ರಕರ್ತನ ಮೇಲೆ ಹಲ್ಲೆ ಮಾಡಿ, ಆತನ ಬಟ್ಟೆ ಬಿಚ್ಚಿಸಿ ಬಲವಂತವಾಗಿ ಮೂತ್ರ ಕುಡಿಸಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ. ರೈಲ್ವೆ ಪೊಲೀಸರು ಟಿವಿ ವರದಿಗಾರ ಅಮಿತ್ ಶರ್ಮಾ ಅವರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಹೀನ ಕೃತ್ಯಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.

 

 

ಸುಕಾಸುಮ್ಮನೆ ಪೊಲೀಸರು ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ, ಈ ಕುರಿತು ಅಮಿತ್ ಮಾಹಿತಿ ನೀಡಿದ್ದು, ವರದಿಗೆ ತೆರಳಿದ್ದಾಗ ಏಕಾಏಕಿ ಪೊಲೀಸರು ಬಂದು ಹಲ್ಲೆ ಮಾಡಿದ್ದಾರೆ, ಅವರು ಸಮವಸ್ತ್ರವನ್ನು ಕೂಡ ಧರಿಸಿರಲಿಲ್ಲ. ಮೊಬೈಲ್ ಹಾಗೂ ಕ್ಯಾಮರಾವನ್ನು ಕಿತ್ತುಕೊಂಡು ಅದನ್ನು ಪುಡಿಪುಡಿ ಮಾಡಿದ್ದಾರೆ.

ನಾನು ಅವರ ಮಧ್ಯೆ ಸಿಕ್ಕಿಹಾಕಿಕೊಂಡೆ. ಆ ವೇಳೆ ನನ್ನ ಬಟ್ಟೆ ಬಿಚ್ಚಿಸಿ ನನ್ನ ಬಾಯಿಗೆ ಮೂತ್ರವನ್ನು ಮಾಡಿದರು ಎಂದು ಶರ್ಮಾ ದೂರಿದ್ದಾರೆ. ಪತ್ರಕರ್ತನನ್ನು ಬಂಧಿಸಿರುವ ವಿಷಯ ತಿಳಿದು ಪೊಲೀಸ್‌ ಠಾಣೆಗೆ ಹಲವಾರು ಪತ್ರಕರ್ತರು ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಮಿತ್‌ ಶರ್ಮಾಗೆ ಹೊಡೆಯುತ್ತಿರುವ ದೃಶ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್‌ ಆಗಿದೆ.

ಅಮಿತ್ ಶರ್ಮಾ ಮೇಲಿನ ದಾಳಿ ಖಂಡಿಸಿ ನೂರಾರು ಪತ್ರಕರ್ತರು ಶಾಮ್ಲಿ ಜಿಲ್ಲಾ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು ತಪ್ಪಿತಸ್ಥ ರೈಲ್ವೆ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಮಾನತು: ಅಮಿತ್ ಶರ್ಮಾ ಮೇಲೆ ದಾಳಿ ಮಾಡಿರುವ ಮೂವರು ರೈಲ್ವೆ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಅಮಿತ್ ಶರ್ಮಾ ಮೇಲಿನ ದಾಳಿಯ ವಿಡಿಯೊವನ್ನು ಪರಿಶೀಲಿಸಿ, ಘಟನಾ ಸ್ಥಳದಲ್ಲಿದ್ದ ರೈಲ್ವೆ ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top