fbpx
ಸಮಾಚಾರ

ಅಂಚೆ ಪರೀಕ್ಷೆಯಲ್ಲಿ ಕನ್ನಡವನ್ನು ಕೈಬಿಟ್ಟ ಕೇಂದ್ರ ಸರ್ಕಾರ- ಇನ್ಮುಂದೆ ಹಿಂದಿ/ಇಂಗ್ಲಿಷ್ ನಲ್ಲಿ ಮಾತ್ರ ಪರೀಕ್ಷೆ.

ಪೋಸ್ಟ್‌ಮೆನ್ ಮತ್ತು ಇತರ ನಾಲ್ಕು ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವ ಆಯ್ಕೆಯನ್ನು ಅಂಚೆ ಇಲಾಖೆ ತೆಗೆದುಹಾಕಿದೆ. ಅಂಚೆ ಇಲಾಖೆಯ ನೇಮಕಾತಿಗೆ ನಡೆಯುವ ಪರೀಕ್ಷೆಗಳು ಈಗ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಇರಲಿವೆ ಎಂದು ಇಲಾಖೆ ಅಧಿಸೂಚನೆ ಹೊರಡಿಸಿಸಿದೆ.

ಕಳೆದ ವರ್ಷದವರೆಗೆ ಯಾವುದೇ 15 ಪ್ರಾದೇಶಿಕ ಭಾಷೆಗಳಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶವಿತ್ತು. ಇವುಗಳಲ್ಲಿ ದಕ್ಷಿಣ ರಾಜ್ಯಗಳ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿವೆ. ಜುಲೈ 11 ರಂದು ಬಿಡುಗಡೆಯಾದ ಪರಿಷ್ಕೃತ ಪರೀಕ್ಷಾ ಮಾದರಿಯನ್ನು ಉದ್ಯೋಗ ಆಕಾಂಕ್ಷಿಗಳು ಖಂಡಿಸಿದ್ದಾರೆ. ಕೊನೆಯ ನಿಮಿಷದ ಈ ನಿಯಮ ಬದಲಾವಣೆ ಮಾಡಲು ಕಾರಣವೇನು ಎಂಬುದನ್ನು ಅಂಚೆ ಇಲಾಖೆ ಎಲ್ಲಿಯೂ ಉಲ್ಲೇಖಿಸಿಲ್ಲ.

“ಈ ಪ್ರಶ್ನೆಗಳು ಇಂಗ್ಲಿಷ್, ಹಿಂದಿ ಅಥವಾ ರಾಜ್ಯದ ಸ್ಥಳೀಯ ಭಾಷೆಯಲ್ಲಿರುತ್ತವೆ” ಎಂದು ಮೇ 16 ರ ಅಧಿಕೃತ ಅಧಿಸೂಚನೆಯಲ್ಲಿ ಹೊರಡಿಸಲಾಗಿತ್ತು. ಆದಾಗ್ಯೂ, ಇಲಾಖೆ ಜುಲೈ 11 ರಂದು ಪರೀಕ್ಷಾ ಮಾದರಿಯನ್ನು ಪರಿಷ್ಕರಿಸಿತು, ಭಾಷಾ ಆಯ್ಕೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ಗೆ ಸೀಮಿತಗೊಳಿಸಿ ಪ್ರಾದೇಶಿಕ ಭಾಷಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಪರೀಕ್ಷೆಯನ್ನು ಅಥವಾ ಇಂಗ್ಲಿಷ್ ನಲ್ಲಿ ಮಾತ್ರವೇ ನಡೆಸಿದರೆ ಕರ್ನಾಟಕದಲ್ಲಿ ಇರುವ ಸಾವಿರಾರು ಅಂಚೆ ಉದ್ಯೋಗಗಳು ಕನ್ನಡಿಗರ ಕೈತಪ್ಪಲಿವೆ. ಕೇಂದ್ರಸರ್ಕಾರದ ಹಿಂದಿ ವ್ಯಾಮೋಹದಿಂದ ಕನ್ನಡಿಗರು ಉದ್ಯೋಗ ಕಳೆದುಕೊಂಡು ತಮಗೆ ಸಿಗಬೇಕಾದ ಕೆಲಸಗಳನ್ನು ಹಿಂದಿಗರಿಗೆ ಬಿಟ್ಟುಕೊಡಬೇಕಾದ ಪರಿಸ್ಥಿತಿ ಎದುರಾಗುತ್ತದೆ.. ಸ್ಥಳೀಯರ ಹೊಟ್ಟೆ ಮೇಲೆ ಹೊಡೆದು ಪರರಾಜ್ಯದ ಹಿಂದಿಗರ ಉದ್ದಾರ ಮಾಡಲು ಹೊರಟಿರುವ ಕೇಂದ್ರದ ಈ ನಡೆಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ.

 

 

ಇನ್ನು ಈ ವಿಚಾರವಾಗಿ ರಾಜ್ಯಸಭಾ ಸದಸ್ಯ ಜಿಸಿ ಚಂದ್ರಶೇಖರ್ ಅವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ . ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಆಕ್ರೋಶ ಹೊರಹಾಕಿರುವ ಜಿಸಿ ಚಂದ್ರಶೇಖರ್ “ಕೇಂದ್ರ ಸರ್ಕಾರದಿಂದ ಅಂಚೆ ಕಚೇರಿ ಇಂದ ಕನ್ನಡ ಮತ್ತು ಎಲ್ಲ ದಕ್ಷಿಣ ಭಾಷೆ ಕೈ ಬಿಡಲು ನಿರ್ಧಾರ!.ಏಕೆ ಹಿಂದಿಯೇತರ ಇತರ ಭಾರತೀಯ ಭಾಷೆಗಳ ಮೇಲೆ ಮಲತಾಯಿ ದೋರಣೆ. ದಯವಿಟ್ಟು ಹಿಂದಿ ಹೇರಿಕೆಯನ್ನು ನಿಲ್ಲಿಸಿ ಮತ್ತು ಹಿಂದಿನ ವರ್ಷದ ಅಧಿಸೂಚನೆಗೆ ಮತ್ತೆ ಜಾರಿಗೆ ತನ್ನಿ” ಎಂದು ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top