fbpx
ಸಮಾಚಾರ

ಅರುಣ್ ಜೇಟ್ಲಿ ಸ್ಥಿತಿ ಗಂಭೀರ- ರಾತ್ರೋರಾತ್ರಿ ಆಸ್ಪತ್ರೆಗೆ ಗಣ್ಯರ ದೌಡು.

ಕಳೆದ ಏಳು ದಿನಗಳಿಂದ ಹೊಸದಿಲ್ಲಿಯ ಏಮ್ಸ್‌ (ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ)ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಹಣಕಾಸು ಸಚಿವ, ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಜೇಟ್ಲಿ ಅವರ ಶ್ವಾಸಕೋಶದಲ್ಲಿ ನೀರು ತುಂಬಿದ್ದು , ಈ ಕಾರಣದಿಂದ ಅವರಿಗೆ ಉಸಿರಾಡಲು ಸಮಸ್ಯೆಯಾಗುತ್ತಿದೆ. ಶ್ವಾಸಕೋಶದಿಂದ ನೀರನ್ನು ಹೊರತೆಗೆಯಲಾಗುತ್ತಿದ್ದರೂ, ಮರಳಿ ತುಂಬಿಕೊಳ್ಳುತ್ತಿದೆ. ಹೀಗಾಗಿ ಅವರ ಸ್ಥಿತಿ ಚಿಂತಾಜನಕವಾಗಿದೆ.

ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅರುಣ್​ ಜೇಟ್ಲಿ ಈ ಹಿಂದೆಯೂ ಏಮ್ಸ್​ನಲ್ಲಿ ಚಿಕಿತ್ಸೆ ಪಡೆದಿದ್ದರು. ಕಳೆದ ವಾರದಿಂದ ಏಮ್ಸ್​ ಆಸ್ಪತ್ರೆಯ ವೈದ್ಯರು ಅರುಣ್​ ಜೇಟ್ಲಿ ಆರೋಗ್ಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇದುವರೆಗೂ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಇಲಾಖೆಯ ರಾಜ್ಯ ಸಚಿವೆ ಅಶ್ವಿನಿ ಚೌಬೆ, ಬಿಜೆಪಿ ಕಾರ್ಯಾಧ್ಯಕ್ಷ ಜೆಪಿ ನಡ್ಡಾ, ಜೆಡಿಯು ಅಧ್ಯಕ್ಷ ಶರದ್ ಯಾದವ್ ಕಳೆದ ವಾರ ಏಮ್ಸ್​ ಆಸ್ಪತ್ರೆಗೆ ತೆರಳಿ ಅರುಣ್​ ಜೇಟ್ಲಿ ಅವರ ಆರೋಗ್ಯ ವಿಚಾರಿಸಿದ್ದರು.

ಕಳೆದ ಶನಿವಾರ, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಏಮ್ಸ್ ಗೆ ಭೇಟಿ ನೀಡಿ ಜೇಟ್ಲಿಯ ಆರೋಗ್ಯದ ಬಗ್ಗೆ ವಿಚಾರಿಸಿದಾಗ, ಮಾಜಿ ಸಚಿವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅವರ ಕಚೇರಿ ತಿಳಿಸಿತ್ತು. ವೃತ್ತಿಯಲ್ಲಿ ವಕೀಲರಾದ ಜೇಟ್ಲಿ, ಬಿಜೆಪಿ ಸರ್ಕಾರದ ಮೊದಲ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top