fbpx
ಸಮಾಚಾರ

ನಾತಿಚರಾಮಿ ಚಿತ್ರತಂಡದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಿರ್ದೇಶಕ ದಯಾಳ್ ಪದ್ಮನಾಭನ್.

ನಾತಿಚರಾಮಿ’ ಸಿನಿಮಾ ಚಿತ್ರಮಂದಿರದಲ್ಲಿ ಅಷ್ಟಾಗಿ ಸದ್ದು ಮಾಡದಿದ್ದರೂ ಪ್ರಶಸ್ತಿ ಗಳಿಕೆ ವಿಚಾರದಲ್ಲಿ ಮೊದಲ ಸ್ಥಾನದಲ್ಲಿತ್ತು. ಈ ಚಿತ್ರಕ್ಕೆ ಬರೋಬ್ಬರಿ 5 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಲಭ್ಯವಾಗಿದ್ದವು. ಆದರೆ, ಈಗ ಪ್ರಶಸ್ತಿಗೆ ತಡೆನೀಡುವಂತೆ ಕೋರಿ ಹೈಕೋರ್ಟ್​​ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ!

ಸಿನಿಮಾ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಅರ್ಜಿ ದಾಖಲಿಸಿದ್ದು, ವಕೀಲ ಜಿ.ಆರ್.ಮೋಹನ್‌ ವಕಾಲತ್ತು ವಹಿಸಿದ್ದಾರೆ. ಈ ಅರ್ಜಿ ವಿಚಾರಣೆಗೆ ಬರಬೇಕಿದೆ.ನವದೆಹಲಿಯಲ್ಲಿರುವ ಚಲನಚಿತ್ರೋತ್ಸವ ನಿರ್ದೇಶನಾಲಯದ ಕಾರ್ಯದರ್ಶಿ, 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ–2018ರ ಆಯ್ಕೆ ಸಮಿತಿ ಸದಸ್ಯರಾಗಿದ್ದ ಬಿ.ಎಸ್‌.ಲಿಂಗದೇವರು ಮತ್ತು ’ನಾತಿಚರಾಮಿ’ ಚಿತ್ರದ ನಿರ್ಮಾಪಕ ಎಂ.ರಮೇಶ್ ಅವರನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಆಯ್ಕೆ ಸಮಿತಿ ಸದಸ್ಯರಾಗಿದ್ದ ಬಿ.ಎಸ್‌.ಲಿಂಗದೇವರು, ಅಕ್ಕ ಕಮ್ಯುನಿಕೇಷನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ನಿರ್ದೇಶಕರಾಗಿದ್ದಾರೆ ಮತ್ತು ನಾತಿಚರಾಮಿ ಚಿತ್ರದ ಸಂಕಲನಕ್ಕೆ ಅಕ್ಕ ಕಂಪನಿ ಸಹಾಯ ಮಾಡಿದೆ. ಇದರಿಂದಾಗಿ ಲಿಂಗದೇವರು ನಾತಿಚರಾಮಿ ಚಿತ್ರದ ನಿರ್ಮಾಣದಲ್ಲಿ ನೇರ ಪಾತ್ರವಿದೆ. ಆದರೆ, ಆಯ್ಕೆ ಸಮಿತಿ ಮುಂದೆ ನೀಡಲಾಗಿರುವ ಘೋಷಣಾ ಪ್ರಮಾಣ ಪತ್ರದಲ್ಲಿ ಈ ಅಂಶವನ್ನು ಮುಚ್ಚಿಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ತಮ್ಮ ‘ಆ ಕರಾಳ ರಾತ್ರಿ’ ಚಿತ್ರಕ್ಕೆ ನಾತಿಚರಾಮಿ ಚಿತ್ರಕ್ಕಿಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.ಅ ಚಿತ್ರವನ್ನು ಪ್ರಶಸ್ತಿಗೆ ಪರಿಗಣಿಸದೆ, ನಾತಿಚರಾಮಿಗೆ ಐದು ಪ್ರಶಸ್ತಿ ನೀಡಿರುವ ನಿರ್ಧಾರ ಏಕಪಕ್ಷೀಯವಾಗಿದೆ ಮತ್ತು ಈ ಕ್ರಮ ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top