fbpx
ಸಮಾಚಾರ

ಅಮಿತಾಭ್​ ಬಚ್ಚನ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮುಂಬಯಿನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದ ಅಮಿತಾಭ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿವೆ ಮೂಲಗಳು. ಕಳೆದ ಮೂರು ದಿನಗಳಿಂದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

77 ವರ್ಷದ ಅಮಿತಾಬ್ ಬಚ್ಚನ್ ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಅವರು ಇನ್ನೂ ವೀಕ್ಷಣೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಚ್ಚನ್ ವಾಡಿಕೆಯ ತಪಾಸಣೆಗಾಗಿ ಬಂದಿದ್ದರು ಎಂದು ಆಸ್ಪತ್ರೆಯ ಮೂಲವು ಪಿಟಿಐಗೆ ತಿಳಿಸಿದ್ದು, ಆದಾಗ್ಯೂ, ಆರಂಭಿಕ ವರದಿಗಳು ಯಕೃತ್ತಿನ ಸಮಸ್ಯೆಗಳಿಂದಾಗಿ ನಟನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಸೂಚಿಸಿದೆ.

ಕಳೆದು ಹಲವು ತಿಂಗಳಿಂದ ಯಕೃತ್ ಸಮಸ್ಯೆಯಿಂದ ಬಳಲುತ್ತಿರುವ ಬಚ್ಚನ್ ಆರೋಗ್ಯದಲ್ಲಿ ಮಂಗಳವಾರ ಅತೀವ ಏರು ಪೇರು ಕಂಡಿತ್ತು. ಅದಕ್ಕೆ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ವಿಶೇಷ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದು, ಅಭಿಮಾನಿಗಳ ಆತಂಕದ ಪ್ರಶ್ನೆಗಳಿಗೆ ಆಸ್ಪತ್ರೆಯ ವೈದ್ಯರೇ ಉತ್ತರಿಸಿದ್ದಾರೆ. ಮಿಸ್ಟರ್ ಬಚ್ಚನ್ ರೂಟೀನ್ ಚೆಕ್ ಅಪ್‌ಗೆ ಬಂದಿದ್ದು, ಆರೋಗ್ಯದಿಂದ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ, ಈ ಸುದ್ದಿಯನ್ನು ಅಲ್ಲಗಳೆದಿರುವ ಅಮರ್ ಉಜಾಲ ಎಂಬ ಪತ್ರಿಕೆ, ಇದೊಂದು ಕಾಲ್ಪನಿಕ ಸುದ್ದಿ. ಅಭಿಮಾನಿಗಳು ಗಾಬರಿಯಾಗುವ ಅಗತ್ಯವಿಲ್ಲ. ಅಮಿತಾಭ್ ಬಚ್ಚನ್ ಆರೋಗ್ಯವಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಎಂಬ ಸುದ್ದಿ ಸುಳ್ಳು. ನಾನಾವತಿ ಆಸ್ಪತ್ರೆಗೆ ರೊಟೀನ್​ ಚೆಕಪ್​ಗೆಂದು ಹೋಗಿದ್ದ ಅಮಿತಾಭ್ ಬಚ್ಚನ್ ನಂತರ ಮನೆಗೆ ಮರಳಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವುದು ಇದಕ್ಕೆ ಸಾಕ್ಷಿ ಎಂದು ಹಿಂದಿ ಪತ್ರಿಕೆ ವರದಿ ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top