fbpx
ಸಮಾಚಾರ

ಐಪಿಎಲ್ ಇತಿಹಾಸದಲ್ಲೇ ಮೊದಲ ಮಹಿಳಾ ಸಹಾಯಕ ಸಿಬ್ಬಂದಿಯನ್ನು ನೇಮಿಸಿದ ಆರ್‌ಸಿಬಿ.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣದೇ ಇದ್ದರೂ, ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಂದು ಹೊಸತನಕ್ಕೆ ಕೈಹಾಕಿದೆ. ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫ್ರಾಂಚೈಸಿ ತಂಡದ ಸಿಬ್ಬಂದಿಯಾಗಿ ಮಹಿಳೆಯನ್ನು ನೇಮಿಸಿಕೊಂಡ ಶ್ರೇಯವನ್ನು ಆರ್​ಸಿಬಿ ಸಂಪಾದಿಸಿದೆ.

 

 

ತಂಡದ ಕ್ರೀಡಾ ಮಸಾಜ್ ಥೆರಪಿಸ್ಟ್ ಆಗಿ ನವನೀತಾ ಗೌತಮ್ ಅವರನ್ನು ನೇಮಕ ಮಾಡಲಾಗಿದೆ. ಐಪಿಎಲ್‍ನ ಯಾವುದೇ ತಂಡವೂ ಕೂಡ ಸಹಾಯಕ ಸಿಬ್ಬಂದಿಯಾಗಿ ಮಹಿಳೆಯರನ್ನು ಇದುವರೆಗೂ ನೇಮಕ ಮಾಡಿಕೊಂಡಿರಲಿಲ್ಲ. ತಂಡದ ಮುಖ್ಯ ಫಿಸಿಯೋ ಥೆರಪಿಸ್ಟ್‌ ಆಗಿರುವ ಈವನ್‌ ಸ್ಪೀಚ್ಲಿ ಜೊತೆಗೆ ಸಹಯಕರಾಗಿ ನವನೀತ ಗೌತಮ್‌ ಕಾರ್ಯ ನಿರ್ವಹಿಸಲಿದ್ದಾರೆ. ಆಟಗಾರರ ಸ್ಥಿತಿಗತಿಗಳನ್ನು ಅರಿತು ಸೂಕ್ತವಾದ ಮಸಾಜ್‌ ನೀಡುವುದರ ಕಡೆಗೆ ಸ್ಟ್ರೆಂತ್‌ ಅಂಡ್‌ ಕಂಡೀಷನಿಂಗ್‌ ಕೋಚ್‌ ಶಂಕರ್‌ ಬಾಸು ಅವರೊಟ್ಟಿಗೆ ಕೆಲಸ ಮಾಡಲಿದ್ದಾರೆ.

‘ನವನೀತಾ ಅವರು ತಂಡದ ಮುಖ್ಯ ಫಿಸಿಯೋಥೆರಪಿಸ್ಟ್ ಇವಾನ್ ಸ್ಪೀಚ್ಲಿ ಮತ್ತು ಸ್ಟ್ರೆಂಥ್ –ಕಂಡಿಷನಿಂಗ್ ಕೋಚ್ ಶಂಕರ್ ಬಸು ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವರು. ಆಟಗಾರರ ದೈಹಿಕ ಕ್ಷಮತೆಯನ್ನು ಆರೋಗ್ಯಪೂರ್ಣವಾಗಿಡಲು ಮಸಾಜ್‌ ಉತ್ತಮ ದಾರಿಯಾಗಿದೆ. ಈ ವಿಭಾಗವನ್ನು ನವನೀತಾ ಅವರು ನಿರ್ವಹಿಸಲಿದ್ದಾರೆ’ ಎಂದು ಆರ್‌ಸಿಬಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಹಿಳಾ ಸಿಬ್ಬಂದಿ ನೇಮಕಕ್ಕೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲು ಉತ್ತಮ ತಂಡದೊಂದಿಗೆ ಟ್ರೋಫಿ ಗೆಲ್ಲಿ ಎಂದು ಕೆಲವರು ತಂಡದ ಕಾಲೆಳೆದಿದ್ದಾರೆ. ಮತ್ತೆ ಕೆಲವರು ತಂಡದ ಬೆಂಬಲಕ್ಕೆ ನಿಂತಿದ್ದು, ಮಹಿಳಾ ಸಿಬ್ಬಂದಿಯಾಗಿ ನೇಮಕಗೊಂಡಿರುವ ನವನೀತಾ ಅವರಿಗೆ ಶುಭ ಕೋರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top