fbpx
ಸಮಾಚಾರ

ಆರ್.ಅಶ್ವಿನ್‌ಗೆ ಡಬಲ್ ಆಘಾತ: ಮಾಡಿದ ಎಡವಟ್ಟಿಗೆ ಮ್ಯಾಚ್ ರೆಫ್ರಿಯಿಂದ ದಂಡ!

ವಿಜಯ್‌ ಹಜಾರೆ ಕ್ರಿಕೆಟ್‌ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಲಿಳಿದು ಅಚ್ಚರಿ ಮೂಡಿಸಿದ ತಮಿಳುನಾಡು ಕ್ರಿಕೆಟಿಗ ಆರ್‌.ಅಶ್ವಿನ್‌ ಅವರಿಗೆ ಪಂದ್ಯದ ರೆಫ್ರಿ ದಂಡ ವಿಧಿಸಲಾಗಿದೆ.

ಅಶ್ವಿನ್‌ ಬ್ಯಾಟಿಂಗ್‌ಗೆ ಬರುವಾಗ ಅವರು ಧರಿಸಿದ್ದ ಹೆಲ್ಮೆಟ್‌ನಲ್ಲಿ ಬಿಸಿಸಿಐ ಲೋಗೋವಿತ್ತು. ದೇಸಿ ಕ್ರಿಕೆಟ್‌ನಲ್ಲಿ ಬಿಸಿಸಿಐ ಲೋಗೋ (ಚಿಹ್ನೆ) ಇರುವ ಸಮವಸ್ತ್ರ ಧರಿಸುವಂತಿಲ್ಲ. ಹೀಗಾಗಿ ನಿಯಮ ಉಲ್ಲಂಘಿಸಿರುವ ಅಶ್ವಿನ್‌ಗೆ ಮ್ಯಾಚ್‌ ರೆಫರೀ ಚಿನ್ಮಯ್ ಶರ್ಮಾ ದಂಡ ವಿಧಿಸಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಕರ್ನಾಟಕ ತಂಡದ ವಿರುದ್ಧದ ಫೈನಲ್ ಪಂದ್ಯದಲ್ಲಿ ತಮಿಳುನಾಡು ಪರ ಆರ್.ಅಶ್ವಿನ್ 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೈದಾನಕ್ಕೆ ಇಳಿದಿದ್ದರು. ಇದು ಕ್ರಿಕೆಟ್ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು. ಆದರೆ 13 ಎಸೆತಗಳನ್ನು ಎದುರಿಸಿದ ಆರ್.ಅಶ್ವಿನ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ತಮಿಳುನಾಡು ತಂಡ ತನ್ನ ಪಾಲಿನ 49.5 ಓವರ್‌ಗಳಲ್ಲಿ 252 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಗುರಿ ಬೆನ್ನತ್ತಿದ ಕರ್ನಾಟಕ ತಂಡ 23 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 146 ರನ್‌ ಗಳಿಸಿದ್ದಾಗ ಸುರಿದ ಧಾರಾಕಾರ ಮಳೆಯಿಂದಾಗಿ ಪಂದ್ಯವನ್ನು ನಿಲ್ಲಿಸಲಾಯಿತು. ವಿ ಜಯದೇವನ್‌ (ವಿಜೆಡಿ) ನಿಯಮದ ಅನ್ವಯ ಕರ್ನಾಟಕ ತಂಡ 1 ವಿಕೆಟ್‌ ನಷ್ಟಕ್ಕೆ ಕನಿಷ್ಠ 87 ರನ್‌ ಗಳಿಸಿರಬೇಕಿತ್ತು. ಹೀಗಾಗಿ ಒಟ್ಟು 60 ರನ್‌ಗಳ ಭಾರಿ ಮುನ್ನಡೆಯಲ್ಲಿದ್ದ ಕರ್ನಾಟಕ ತಂಡಕ್ಕೆ ನಾಲ್ಕನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಅದೃಷ್ಟ ಒಲಿಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top