fbpx
ಸಮಾಚಾರ

“ದೇಶದ ಇತಿಹಾಸದಲ್ಲಿ ಚುನಾವಣೆಯಲ್ಲಿ ಸೋತವರಿಗೆ ಡಿಸಿಎಂ ಸ್ಥಾನ ಸಿಕ್ಕಿದೆ” ಲಕ್ಷಣ ಸವದಿಗೆ ತಿವಿದ ರೇಣುಕಾಚಾರ್ಯ

ಉಪ ಚುನಾವಣೆಗೆ ಅನರ್ಹ ಶಾಸಕರಿಗೆ ಟಿಕೆಟ್ ನೀಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಹೇಳಿಕೆಯನ್ನು ಖಂಡಿಸಿರುವ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸವದಿ ಅವರ ವಿರುದ್ಧ ಗುಡುಗಿದ್ದಾರೆ. “ಲಕ್ಷ್ಮಣ ಸವದಿ ಸ್ಥಿತಿ ಅಲ್ಪನಿಗೆ ಐಶ್ವರ್ಯ ಬಂದಂತಾಗಿದೆ” ಎಂದು ರೇಣುಕಾಚಾರ್ಯ ವ್ಯಾಖ್ಯಾನಿಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಅಲ್ಪನಿಗೆ ಐಶ್ವರ್ಯ ಬಂದರೆ ಏನ್ ಮಾಡುತ್ತಾರೋ ಅದೇ ರೀತಿ ಡಿಸಿಎಂ ಲಕ್ಷ್ಮಣ ಸವದಿ ಸ್ಥಿತಿಯಾಗಿದೆ. ನಿಜಕ್ಕೂ ಲಕ್ಷ್ಮಣ ಸವದಿ ವರ್ತನೆ ಸರಿಯಲ್ಲ. ಅತೃಪ್ತ ಶಾಸಕರ ಬಗ್ಗೆ ವಿನಾಕಾರಣ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುತ್ತದೆ. ಈ ವಿಚಾರದ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಗುಡುಗಿದರು.

ದೇಶದ ಇತಿಹಾಸದಲ್ಲಿ ಚುನಾವಣೆಯಲ್ಲಿ ಸೋತವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಇದನ್ನು ಮೊದಲು ಅವರು ತಿಳಿದುಕೊಳ್ಳಲಲಿ. ಉಪಚುನಾವಣೆ ಮುಗಿದ ನಂತರ ಅವರ ಅಸ್ತಿತ್ವ ಏನು ಎಂಬುದನ್ನು ಮೊದಲು ಅವರು ಅರಿತುಕೊಳ್ಳಲಿ. ಪಕ್ಷಕ್ಕೆ ಹಾನಿ ಮಾಡುವ ಹೇಳಿಕೆ ನೀಡುವುದು ಸರಿಯಲ್ಲ. ಈ ಬಗ್ಗೆ ಯಡಿಯೂರಪ್ಪನವರೊಂದಿಗೆ ಮಾತನಾಡುತ್ತೇನೆ.

ಅನರ್ಹ ಶಾಸಕರು ಬಿಜೆಪಿಗೆ ಬರುತ್ತೇವೆಂದು ಇನ್ನೂ ಹೇಳಿಲ್ಲ. ಅವರು ಬರುತ್ತೇವೆ ಎಂದರೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ಅವರಿಗೆ ಟಿಕೆಟ್ ನೀಡುವುದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಎಂ.ಪಿ. ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top