fbpx
ಸಮಾಚಾರ

ಥಿಯೇಟರ್ ನಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲದ್ದಕ್ಕೆ ವಿದ್ಯಾರ್ಥಿಗಳ ಮೇಲೆ ಎಫ್ಐಆರ್ ದಾಖಲು!

ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ವೇಳೆ ಎದ್ದು ನಿಂತು ಗೌರವ ನೀಡದ ಅಪರಿಚಿತರ ವಿರುದ್ಧ ಸುಬ್ರಮಣ್ಯನಗರ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ರಾಷ್ಟ್ರೀಯ ಚಿಹ್ನೆಗಳಿಗೆ ಅಗೌರವ ತಡೆ ಕಾಯಿದೆ ಕಲಂ 3ರ ಅಡಿ ಕೇಸ್‌ ದಾಖಲಾಗಿದೆ. ಎಫ್ಐಆರ್ ನಲ್ಲಿ ಯಾರ ಹೆಸರನ್ನೂ ದಾಖಲಿಸಿಲ್ಲ.

ಕಳೆದ ತಿಂಗಳು 23ರಂದು ಪಿವಿಆರ್ ಒರಾಯನ್ ಮಾಲ್ ನಲ್ಲಿ ಸಿನಿಮಾ ಆರಂಭದಲ್ಲಿ ರಾಷ್ಟ್ರಗೀತೆ ಪ್ರಸಾರವಾಗುವಾಗ ಏಳು ವಿದ್ಯಾರ್ಥಿಗಳ ಗುಂಪೊಂದು ನಿಂತುಕೊಂಡು ಗೌರವ ಸೂಚಿಸಲಿಲ್ಲ ಎಂದು ಕನ್ನಡದ ನಟ ಮತ್ತು ಆತನ ಸ್ನೇಹಿತೆ ವಿದ್ಯಾರ್ಥಿಗಳನ್ನು ನಿಂದಿಸಿದ್ದರು. ಆ ಸಂದರ್ಭದಲ್ಲಿ ಮಾಡಿದ್ದ ವಿಡಿಯೊ ವೈರಲ್ ಆಗಿ ಸುದ್ದಿಯಾಗಿತ್ತು.

ಈ ಘಟನೆಯನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿತ್ತು. ಮೂರು ಗಂಟೆ ಕುಳಿತುಕೊಂಡು ಸಿನಿಮಾ ನೋಡುವ ನಿನಗೆ ದೇಶಕ್ಕಾಗಿ 52 ಸೆಕೆಂಡ್​ಗಳ ನೀಡಲು ಆಗುವುದಿಲ್ಲವೇ? ನೀನು ಪಾಕಿಸ್ತಾನದ ಉಗ್ರ ಎಂದು ವಿಡಿಯೋದಲ್ಲಿ ಒಬ್ಬ ಕುಳಿತುಕೊಂಡಿದ್ದವರಿಗೆ ಹೇಳಿದ್ದಾನೆ. ರಾಷ್ಟ್ರಗೀತೆಗೆ ಅಗೌರವ ತೋರಿದವರ ಮೇಲೆ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಆ ದೃಶ್ಯವನ್ನು ಗಮನಿಸಿದ ಸುಬ್ರಹ್ಮಣ್ಯನಗರ ಪೊಲೀಸರು ನಾಲ್ವರು ಅಪರಿಚಿತರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

”ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತದೆ. ಪಿವಿಆರ್‌ನಲ್ಲಿರುವ ಸಿಸಿ ಕ್ಯಾಮೆರಾ ವಿಡಿಯೋ ಸೇರಿದಂತೆ ಲಭ್ಯವಿರುವ ದಾಖಲೆ ನೀಡುವಂತೆ ಕೇಳಲಾಗಿದೆ. ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ,” ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top