fbpx
ಸಮಾಚಾರ

ಬ್ರಿಟನ್‌ ಹಣಕಾಸು ಸಚಿವರಾಗಿ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್‌ ನೇಮಕ

ಬ್ರಿಟನ್ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಇನ್ಫೋಸಿಸ್‌ ಸಹ – ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್‌ ಅವರನ್ನು ಬ್ರಿಟನ್‌ ನೂತನ ಹಣಕಾಸು ಸಚಿವರಾಗಿ ಗುರುವಾರ ನೇಮಕ ಮಾಡಿದ್ದಾರೆ. ಅಚ್ಚರಿಯ ಬೆಳೆವಣಿಗೆಯಲ್ಲಿ ಹಾಲಿ ಹಣಕಾಸು ಸಚಿವರಾಗಿದ್ದ ಪಾಕಿಸ್ತಾನ ಮೂಲದ ಸಾಜಿದ್‌ ಜಾವಿದ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ರಿಷಿ ಸುನಕ್‌ ಅವರನ್ನು ಜಾನ್ಸನ್‌ ನೇಮಕ ಮಾಡಿದ್ದಾರೆ.

ಪ್ರಧಾನಿ ಬೋರಿಸ್​ ಜಾನ್ಸನ್​ ನೇತೃತ್ವದಲ್ಲಿ ಗುರುವಾರ ನಡೆದ ಸಂಪುಟ ಪುನಾರಚನೆಯಲ್ಲಿ ಸುನಕ್​ ಆರ್ಥಿಕ ಸಚಿವರಾಗಿ ಬಡ್ತಿ ಪಡೆದಿದ್ದು, ಕನ್ಸರ್ವೇಟಿವ್ ಪಕ್ಷದ ನಾಯಕ​ ಬೋರಿಸ್​, ಸರ್ಕಾರದ ಉನ್ನತ ಸಚಿವರುಗಳಲ್ಲಿ ಒಬ್ಬರಾಗಿದ್ದಾರೆ. ಮತ್ತೊಬ್ಬ ಭಾರತೀಯ ಮೂಲದ ಪ್ರೀತಿ ಪಟೇಲ್ ಸಹ ಗೃಹ ಕಾರ್ಯದರ್ಶಿಯಾಗಿದ್ದು, ಅವರೊಟ್ಟಿಗೆ ಸುನಕ್​ ಕೂಡ ಒಳ್ಳೆಯ ಸ್ಥಾನವನ್ನು ಅಲಂಕರಿಸಿದ್ದಾರೆ.

39 ವರ್ಷದ ರಿಷಿ ರಿಚ್ಮಂಡ್ (ಯಾರ್ಕ್ ಶೈರ್) ಕ್ಷೇತ್ರದ ಕನ್ಸರ್ವೇಟಿವ್ ಪಕ್ಷದ ಸಂಸದರಾಗಿದ್ದು 2015ರಲ್ಲಿ ಬ್ರಿಟನ್‌ ಸಂಸತ್‌ಗೆ ಆಯ್ಕೆಯಾಗಿದ್ದರು. ರಿಷಿ ಈ ಹಿಂದೆ ಖಜಾನೆ ಇಲಾಖೆ ಮುಖ್ಯ ಕಾರ್ಯದರ್ಶಿಯಾಗಿದ್ದರು. ಇದು ಹಣಕಾಸು ಸಚಿವರ ನಂತರದ ಪ್ರಮುಖ ಸ್ಥಾನವಾಗಿದೆ.

ಪ್ರತಿಷ್ಠಿತ ವಿಂಚೆಸ್ಟರ್‌ ಕಾಲೇಜಿನಲ್ಲಿ ಅಧ್ಯಯನ ನಡೆಸಿರುವ ಸುನಕ್‌, ಆಕ್ಸ್‌ಫರ್ಡ್‌ ವಿವಿಯಲ್ಲಿ ರಾಜಕೀಯ, ಫಿಲಾಸಫಿ ಮತ್ತು ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ. ಅಮೆರಿಕಾ ಸ್ಟಾನ್‌ಫರ್ಡ್‌ ವಿವಿಯಿಂದ ಎಂಬಿಎ ಪದವಿಯನ್ನೂ ಅವರು ಪಡೆದುಕೊಂಡಿದ್ದಾರೆ. ರಿಷಿ ಸುನಕ್ ಮೂಲತಃ ಪಂಜಾಬ್’ನವರಾಗಿದ್ದರೂ, ನಾರಾಯಣ್ ಮೂರ್ತಿ ಪುತ್ರಿ ಅಕ್ಷತಾ ಅವರನ್ನು ವಿವಾಹವಾಗುವ ಮೂಲಕ ಕರ್ನಾಟಕದ ಅಳಿಯ ಎಂಬುದು ಹೆಮ್ಮೆಯ ವಿಷಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top